ಸೋಯಿಂಕಾ, ವೋಲೆ
	1934-. ನೈಜೀರಿಯನ್ ಕವಿ, ಕಾದಂಬರಿ ಕಾರ, ನಾಟಕಕಾರ ಹಾಗೂ ವಿಮರ್ಶಕ. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಆಫ್ರಿಕನ್ ಲೇಖಕ. ಈತನ ಪೂರ್ಣ ಹೆಸರು ಅಕಿನ್‍ವಾಂಡೆ ಒಲುವೋಲೆ ಸೋಯಿಂಕಾ. ನೈಜೀರಿಯದ ಅಬುಕುಟಾ ಎಂಬಲ್ಲಿ 1934 ಜುಲೈ 13ರಂದು ಜನಿಸಿದ. ತಂದೆ ಶಾಲಾ ಶಿಕ್ಷಕ, ತಾಯಿ ವ್ಯಾಪಾರಗಾರಳು. ಈತ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದ. ತಾಯಿ ಹೇಳುತ್ತಿದ್ದ ಜನಪದ ಕಥೆಗಳು, ಸುತ್ತುಮುತ್ತಲಿನ ಸಂಗೀತ, ನೃತ್ಯ ಬಾಲ್ಯದಲ್ಲಿ ಸಾಕಷ್ಟು ಪ್ರಭಾವ ಬೀರಿದುವು. ಆರಂಭದ ಶಿಕ್ಷಣವನ್ನು ಇಬಡನ್ ಸರ್ಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪಡೆದ. ಅನಂತರ ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯ ದಿಂದ ಇಂಗ್ಲಿಷ್ ಆನರ್ಸ್ ಪದವಿಯನ್ನೂ ಡಾಕ್ಟೊರೇಟ್ ಪದವಿಯನ್ನೂ ಪಡೆದುಕೊಂಡ. ಕೆಲಕಾಲ ಲಂಡನ್ನಿನಲ್ಲಿ ಶಿಕ್ಷಕನಾಗಿಯೂ ರಾಯಲ್ ಕೋರ್ಟ್ ಥಿಯೇಟರಿನಲ್ಲಿ ನಾಟಕ ವಾಚಕನಾಗಿಯೂ ಕೆಲಸಮಾಡಿದ. ಲಾಗೋಸ್ ವಿಶ್ವವಿದ್ಯಾಲಯದ ಆಫ್ರಿಕನ್ ಸಾಹಿತ್ಯೋಪನ್ಯಾಸಕ, ಇಬಡನ್ ವಿಶ್ವವಿದ್ಯಾಲಯದ ಲಲಿತಕಲೆಗಳ ವಿಭಾಗದ ಮುಖ್ಯಸ್ಥ, ಕೇಂಬ್ರಿಜ್ ವಿಶ್ವವಿದ್ಯಾಲಯದ ಚರ್ಚಿಲ್ ಕಾಲೇಜಿನ ಫೆಲೋ, ಇಂಗ್ಲೆಂಡ್, ಘಾನಾ ಹಾಗೂ ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕ, ರಾಕ್‍ಫೆಲರ್ ರೀಸರ್ಚ್ ಫೆಲೊ - ಹೀಗೆ ಹಲವಾರು ಪ್ರತಿಷ್ಠಿತ ಹುದ್ದೆಗಳಲ್ಲಿ ಕೆಲಸ ಮಾಡಿದ. 1985ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡುವ ತನಕ ಇಫೆ ವಿಶ್ವವಿದ್ಯಾಲಯದಲ್ಲಿ ತೌಲನಿಕ ಸಾಹಿತ್ಯದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ. 

	ಶಾಲಾ ದಿನಗಳಲ್ಲೇ ಮಕ್ಕಳ ಸಾಹಿತ್ಯ ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಈತ ತನ್ನ ನೆಲದ ಅಂತಸ್ಸತ್ತ್ವವನ್ನು ಹೀರಿ ಜೀರ್ಣಿಸಿಕೊಂಡು, ಇಂಗ್ಲಿಷ್ ಭಾಷೆಯ ಸಂಪೂರ್ಣ ಸಿದ್ಧಿ ಪಡೆದು ಸಾಹಿತ್ಯ ಸೃಷ್ಟಿಸಿದವನು. ಪ್ರಪಂಚದ ಹಲವು ದೇಶಗಳಿಗೆ, ಮತಗಳಿಗೆ ಸೇರಿದ ಪುರಾಣ, ತತ್ತ್ವಶಾಸ್ತ್ರ, ಧಾರ್ಮಿಕ ಗ್ರಂಥಗಳ ಅಭ್ಯಾಸ, ಭಗವದ್ಗೀತೆಯ ಓದು, ಕಪ್ಪು ಜನರ ಸಾವುನೋವುಗಳಿಂದ ನೊಂದು ಪಾಕಗೊಂಡ ಮನಸ್ಸು ಇವನ ಸಾಹಿತ್ಯಕ್ಕೆ ಹೊಸ ಕಾಂತಿಯನ್ನು ನೀಡಿದುವು. ನಾಟಕ ಕ್ಷೇತ್ರದಲ್ಲಿ ಈತ ಅನೇಕ ಪ್ರಯೋಗಗಳನ್ನು ಮಾಡಿದ. ಪಾಶ್ಚಾತ್ಯ ಪ್ರಪಂಚದಲ್ಲಿ ಮನ್ನಣೆ ಪಡೆದ ತಾಂತ್ರಿಕ ಸಾಧನೆಯನ್ನು ದೇಶೀಯ ನಾಟಕಕ್ಕೆ ಅಳವಡಿಸಿಕೊಂಡು ಹೊಸ ಪ್ರಯೋಗಗಳನ್ನು ಬಳಕೆಗೆ ತಂದ. ದಿ 1960 ಮಾಸ್ಕ್ಸ್ ಎಂಬ ನಾಟಕ ತಂಡ ರೂಪಿಸಿ ಅದರ ಮೂಲಕ ನಾಟಕ ಕ್ಷೇತ್ರದ ಚಲನಶೀಲತೆಗೆ ಕಾರಣನಾದ.

	ಎ ಡಾನ್ಸ್ ಆಫ್ ದಿ ಫಾರೆಸ್ಟ್ಸ್ ಈತನ ಮೊದಲ ಹಾಗೂ ಪ್ರಮುಖ ನಾಟಕ. ಇದನ್ನು ನೈಜೀರಿಯನ್ನರ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ರಚಿಸಲಾಯಿತು. ಇದೊಂದು ವಿಡಂಬನ ಕೃತಿ. ದಿ ಲಯನ್ ಅಂಡ್ ದಿ ಜುವೆಲ್ ಎಂಬ ನಾಟಕ 1959ರಲ್ಲಿ ಇಬಡನ್‍ನಲ್ಲಿ ಮೊದಲು ಪ್ರದರ್ಶಿತವಾಗಿ ಅನಂತರ 1963ರಲ್ಲಿ ಪ್ರಕಟಗೊಂಡಿತು. ಇದೊಂದು ಗೀತ ನಾಟಕ. ಇದರಲ್ಲಿ ಆಡಂಬರದ ಪಾಶ್ಚಾತ್ಯ ನಾಗರಿಕತೆಗೆ ಮಾರುಹೋದ ಶಾಲಾ ಉಪಾಧ್ಯಾಯರನ್ನು ವಿಡಂಬಿಸಲಾಗಿದೆ. ದಿ ಟ್ರಯಲ್ಸ್ ಆಫ್ ಬ್ರದರ್ ಜೆರೊ (1960), ಜೆರೋಸ್ ಮೆಟಮಾರ್ಫಸಿಸ್ (1972) ಎಂಬ ಕೃತಿಗಳಲ್ಲಿ ಚರ್ಚಿನ ಬುದ್ಧಿವಂತ ಪ್ರವಚನಕಾರರನ್ನೂ ಅವರ ನಡವಳಿಕೆಯನ್ನೂ ಟೀಕಿಸಲಾಗಿದೆ. ಕೊಂಗಿಸ್ ಹಾರ್ವೆಸ್ಟ್ (1965), ದಿ ರೋಡ್ (1965) - ಇವು ಗಂಭೀರ ನಾಟಕಗಳು. ದಿ ಸ್ಟ್ರಾಂಗ್ ಬ್ರೀಡ್ (1963) ಎಂಬ ನಾಟಕದಲ್ಲಿ ಒಂದು ಸಮುದಾಯದ ಜನ ಮಾಡಿದ ಪಾಪಕ್ಕಾಗಿ ಪ್ರತಿವರ್ಷವೂ ಹಳ್ಳಿಯೊಂದರಿಂದ ಒಬ್ಬನನ್ನು ಬಲಿ ನೀಡಬೇಕಾದಂಥ ಸಾಂಪ್ರದಾಯಿಕ ಮೂಢ ಆಚರಣೆಯನ್ನು ಹೇಳಲಾಗಿದೆ. ಡೆತ್ ಅಂಡ್ ದಿ ಕಿಂಗ್ಸ್ ಹಾರ್ಸ್‍ಮನ್ (1979) ಎಂಬ ನಾಟಕದಲ್ಲಿ ವಸಾಹತುಶಾಹಿಗಳಿಗೂ ಸಾಂಪ್ರದಾಯಿಕ ಯೋರುಬಾ ಸಮಾಜಕ್ಕೂ ನಡುವೆ ನಡೆಯುತ್ತಿದ್ದ ಸಂಘರ್ಷವನ್ನು ಚಿತ್ರಿಸಲಾಗಿದೆ. ಬಿಫೋರ್ ದಿ ಬ್ಲಾಕ್ ಔಟ್, ಬ್ಲೂಸ್ ಫಾರ್ ಎ ಪ್ರಾಡಿಗಲ್, ದಿ ಮ್ಯಾಡ್‍ಮ್ಯಾನ್ ಅಂಡ್ ದಿ ಸ್ಪೆಷಲಿಸ್ಟ್ಸ್ - ಇವು ಈತನ ಇತರ ನಾಟಕಗಳು. 

	ಇವನ ನಾಟಕಗಳಲ್ಲಿ ಕಪ್ಪುಜನರ ಹೃದಯದ ಮಿಡಿತ ಅತ್ಯಂತ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಅಬ್ಸರ್ಡ್ ಮತ್ತು ಎಪಿಕ್ ಥಿಯೇಟರ್‍ಗಳಿಗೆ ಸೇರಿದ ತಂತ್ರ ವಿಧಾನಗಳನ್ನು ಬಳಸಿಕೊಂಡರೂ ಈತ ತನ್ನದೇ ಆದ ಧ್ವನಿಯನ್ನು ಅಳವಡಿಸುವ ಮೂಲಕ ನಾಟಕ ಕಲೆಗೆ ಹೊಸತನವನ್ನು ಒದಗಿಸಿಕೊಟ್ಟ. ತನ್ನ ನಾಡಿನ ಮುಖ್ಯ ಘಟನೆಗಳನ್ನು ವಿಡಂಬಿಸಿ ಬರೆಯುವುದರ ಮೂಲಕ ಸಮಕಾಲೀನ ವಾಸ್ತವಿಕತೆಗೆ ಪ್ರಾಧಾನ್ಯ ಕೊಟ್ಟ. ಇವನ ನಾಟಕಗಳಲ್ಲಿ ಪಾಶ್ಚಾತ್ಯ ವಸ್ತು ವಿಷಯಗಳಿದ್ದರೂ ಈ ವಸ್ತುವನ್ನು ಅಗತ್ಯಕ್ಕೆ ತಕ್ಕಂತೆ ನಾಟಕದ ತಂತ್ರಗಳಿಗೆ ಅಳವಡಿಸಿಕೊಂಡು ಯೋರುಬಾ ಜನಪದ ಧರ್ಮಕ್ಕೆ ಅನುಗುಣವಾಗಿ ಬಳಸಲಾಗಿದೆ. ಸಾಂಕೇತಿಕತೆ, ಫ್ಲಾಶ್‍ಬ್ಯಾಕ್ ತಂತ್ರ, ಸ್ವೋಪಜ್ಞ ವಸ್ತು - ಇವು ಇವನ ನಾಟಕ ರಚನೆಗೆ ಶ್ರೀಮಂತಿಕೆಯನ್ನು ತಂದುಕೊಟ್ಟಿವೆ. ಇವನ ಎಲ್ಲ ಕೃತಿಗಳಲ್ಲಿ ಹಾಸ್ಯ, ಅಣಕ, ವ್ಯಂಗ್ಯ ಹಾಗೂ ಕಾವ್ಯಸತ್ತ್ವ ತುಂಬಿಕೊಂಡಿವೆ. ಪಾತ್ರಗಳ ಸಾಮಾಜಿಕ ಸ್ಥಾನಮಾನ ಹಾಗೂ ನೈತಿಕ ಗುಣಗಳಿಗೆ ಅನುಸಾರವಾಗಿ ಭಾಷೆಯ ಬಳಕೆಯಾಗಿದೆ. 

	ಈತ ಕಾದಂಬರಿಗಳನ್ನೂ ಬರೆದಿದ್ದಾನೆ. ದಿ ಇಂಟರ್‍ಪ್ರಿಟರ್ಸ್ (1965)  ಕಾದಂಬರಿಯಲ್ಲಿ ತರುಣ ಬುದ್ಧಿಜೀವಿಗಳು ತಾವು ದೊಡ್ಡ ಕಲಾವಿದರೆಂದು ಸೋಗುಹಾಕಿ ವರ್ತಿಸುವ ಪರಿಯನ್ನು ಚಿತ್ರಿಸಲಾಗಿದೆ. ಸಾಂಕೇತಿವಾಗಿ ಮೂಡಿಬಂದಿರುವ ವಿಶಿಷ್ಟ ಕೃತಿಯಿದು. ಇವನ ಇನ್ನೊಂದು ಕಾದಂಬರಿ ಸೀಸನ್ ಆಫ್ ಅನೋಮಿ (1973). 

	ಈತ ಕವಿಯಾಗಿಯೂ ಆಫ್ರಿಕನ್ನರ ಆಶೋತ್ತರಗಳನ್ನು ಪ್ರತಿಬಿಂಬಿಸಿದ್ದಾನೆ. ಇದನ್ರೇ ಅಂಡ್ ಅದರ್ ಪೊಯೆಮ್ಸ್ (1965), ಪೊಯೆಮ್ಸ್ ಫ್ರಂ ಪ್ರಿಸನ್ (1969 ಇದೇ ಸಂಕಲನ 1972ರಲ್ಲಿ ಎ ಷಟಲ್ ಇನ್ ದಿ ಕ್ರಿಪ್ಟ್ ಎಂಬ ಹೆಸರಿನಲ್ಲಿ ಪುನರ್ ಮುದ್ರಣಗೊಂಡಿದೆ) ಮುಂತಾದ ಕವನ ಸಂಕಲನಗಳಲ್ಲಿ ಶಕ್ತಿಶಾಲಿ ಕವಿಯೊಬ್ಬನ ದರ್ಶನವಾಗುತ್ತದೆ. ಇಲ್ಲಿನ ಕವಿತೆಗಳಲ್ಲಿ ಭಾಷಾಪ್ರಭುತ್ವ, ಭಾವಗೀತಾತ್ಮಕ ಗುಣ, ನಾಟಕೀಯತೆ ತುಂಬಿಕೊಂಡಿದೆ. ಈತನ ಟೆಲಿಫೋನ್ ಕಾನ್ವರ್‍ಸೇಷನ್ ಎಂಬ ಪದ್ಯ ಪ್ರಸಿದ್ಧವಾದುದು. ವರ್ಣಭೇದದ ಸೂಕ್ಷ್ಮತೆಯನ್ನು ನವಿರಾದ ಸಂಭಾಷಣಾ ಶೈಲಿಯಲ್ಲಿ ಗದ್ಯಗಂಧಿಯಾದ ಪದ್ಯದಲ್ಲಿ ಈತ ಹಿಡಿದಿಟ್ಟಿದ್ದಾನೆ. ಬಿಳಿಯರ ಭಾಷೆಯನ್ನು ಕಲಿತು ಅವರಷ್ಟೇ ಸಮರ್ಥವಾಗಿ ಅಭಿವ್ಯಕ್ತಿಸುವ ಚೈತನ್ಯವನ್ನು ಮೆರೆದಿರುವ ಈತ ತೃತೀಯ ಜಗತ್ತಿನ ಅನುಭವವನ್ನು ದಟ್ಟ ರೂಪಕಾತ್ಮಕ ವಿಧಾನದಲ್ಲಿ ಪಡಿಮೂಡಿಸಿದ್ದಾನೆ. ಹಲವು ವಿಮರ್ಶಕರು ಈತನ ನಾಟಕ ಭಾಷೆಯ ರಭಸವನ್ನು ಷೇಕ್ಸ್‍ಪಿಯರ್‍ನ ಶೈಲಿಗೆ ಹೋಲಿಸುವುದುಂಟು. ರಾಣಿ ಇಂಗ್ಲಿಷನ್ನು ಆಧುನಿಕ ಕಾಲದ ಅಗತ್ಯಕ್ಕೆ ಮುರಿದು ಕಟ್ಟಿದವರ ಸಾಲಿಗೆ ಈತ ಸೇರುತ್ತಾನೆ. 

	ಕ್ರಾಂತಿಕಾರರೊಂದಿಗೆ ಸೇರಿ ಸಂಚುಹೂಡಿದನೆಂಬ ಆಪಾದನೆಗೊಳಗಾಗಿ 1967-69 ಅವಧಿಯಲ್ಲಿ ಈತ ಸೆರೆಮನೆವಾಸ ಅನುಭವಿಸಬೇಕಾಯಿತು. ಅಲ್ಲಿಯ ಅನುಭವಗಳನ್ನೂ ತನ್ನ ಬಂಧನಕ್ಕೆ ಕಾರಣಗಳನ್ನೂ ದಿ ಮ್ಯಾನ್ ಡೈಡ್ (1972) ಎಂಬ ಗದ್ಯ ಕೃತಿಯಲ್ಲಿ ಹೇಳಿದ್ದಾನೆ. ಮಿಥ್, ಲಿಟರೇಚರ್ ಅಂಡ್ ದಿ ಆಫ್ರಿಕನ್ ವಲ್ರ್ಡ್ (1976) ಎಂಬುದು ಈತನ ಪ್ರಮುಖ ವಿಮರ್ಶಾಕೃತಿ. ಈ ಪ್ರಬಂಧ ಸಂಕಲನದಲ್ಲಿ ಕಲೆಗಾರನ ಪಾತ್ರ ಮತ್ತು ಯೋರುಬಾ ಜನರ ಪುರಾಣಗಳ ಬಗೆಗಿನ ವಿಶ್ಲೇಷಣೆ ಇದೆ. ಅಕೆ: ದಿ ಇಯರ್ಸ್ ಆಫ್ ಚೈಲ್ಡ್‍ಹುಡ್ (1981) ಎಂಬುದು ಇವನ ಆತ್ಮಕತೆ. 

	ಬಿಳಿಯರ ದಬ್ಬಾಳಿಕೆಗೆ ಗುರಿಯಾಗಿ ಅನೇಕ ವಿಧವಾದ ಕಷ್ಟನಷ್ಟಗಳನ್ನು ಅನುಭವಿಸುತ್ತಿರುವ ಕಪ್ಪು ಜನರ ಅಂತರಂಗ ಮಥನ, ವ್ಯಥೆ, ಪ್ರತಿಭಟನೆಯನ್ನು ಪ್ರತಿಬಿಂಬಿಸಲು ಈತ ಹಲವು ಮಾಧ್ಯಮಗಳನ್ನು ಬಳಸಿಕೊಂಡ. ಬ್ಲಾಕ್ ಅರ್ಫಿಯಸ್, ಒಕಿಕೆ ಎಂಬ ಸಾಹಿತ್ಯಕ ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯನಾಗಿ ಸೇವೆ ಸಲ್ಲಿಸಿದ. ಸ್ವತಂತ್ರ ನೈಜೀರಿಯದಲ್ಲಿ ಸಾಂಸ್ಕøತಿಕ ಚಳವಳಿಯನ್ನು ಹುಟ್ಟುಹಾಕಿದ. ಬಿಳಿಯರ ದುರಹಂಕಾರ ಪ್ರವೃತ್ತಿಯ ವಿರುದ್ಧ ಬಂಡೆದ್ದ ಲೇಖಕರಿಗೆ ಈತ ಸ್ಫೂರ್ತಿಯ ಸೆಲೆಯಾದ. 1986ರಲ್ಲಿ ಇವನಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.					
		(ಎ.ಎಮ್.ಡಿ.; ಬಿ.ಎಸ್.ಪಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ